ವೇದಾಂಗಗಳು
 	ವೇದಗಳ ಅರ್ಥ ಮತ್ತು ವಿಷಯ ತಿಳಿಯಲು ಉಪಯುಕ್ತವಾದ ಕೃತಿಗಳು. ಇವು ಆರು : ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ. ಇವುಗಳಲ್ಲಿ ವ್ಯಾಕರಣ ವೇದಪುರುಷನ ಮುಖ, ಜ್ಯೋತಿಷ ನೇತ್ರಗಳು, ನಿರುಕ್ತ ಕಿವಿಗಳು, ಕಲ್ಪ ಹಸ್ತಗಳು, ಶಿಕ್ಷಾ ಮೂಗು, ಛಂದಸ್ಸು ಎರಡು ಪಾದಗಳು ಎನ್ನಲಾಗಿದೆ. 

	ವೇದಭಾಷೆ ಭಾರತದ ಭಾಷೆಗಳಲ್ಲೆಲ್ಲ ಅತ್ಯಂತ ಪ್ರಾಚೀನವಾದುದು. ಋಷಿಗಳ ಉತ್‍ಸ್ಫೂರ್ತ ಅಂತರ್ದರ್ಶನವನ್ನು ಅವು ಒಳಗೊಂಡಿರುವುದ ರಿಂದ ಅವುಗಳ ಅರ್ಥಜ್ಞಾನ ಇಂದಿನವರಿಗೆ ಸುಲಭವಲ್ಲ. ಋಷಿ, ದೇವತೆ, ಛಂದಸ್ಸು-ಈ ಮೂರನ್ನೂ ಅರಿಯದೆ ವೇದಜ್ಞಾನ ನಿಷ್ಫಲ. ಮುಖ್ಯವಾಗಿ ವಾಗ್ರೂಪವೂ ಛಂದೋಬದ್ಧವೂ ಆಗಿರುವ ವೇದದ ರಹಸ್ಯ ತಿಳಿಯಲು ಯತ್ನಿಸುವ ಮುನ್ನ ಆ ವಾಗ್ರಚನೆಯ ಬಾಹ್ಯಸ್ವರೂಪ ತಿಳಿಸುವ ವ್ಯಾಕರಣಶಾಸ್ತ್ರದ ಹಾಗೂ ಛಂದಸ್ಸಿನ ಸ್ವರೂಪ ವಿವರಿಸುವ ಛಂದಶ್ಶಾಸ್ತ್ರದ ಅಗತ್ಯ ಎದುರಾಗುತ್ತದೆ. ಹೀಗೆ ಪ್ರಾಚೀನ ಋಷಿಗಳಿಂದ ಸಂಚಿತವಾದ ಜ್ಞಾನರಾಶಿ ಗುರುಶಿಷ್ಯರ ಪರಂಪರೆಯಲ್ಲಿ ಉಚ್ಚಾರಣೆಯಿಂ ದಲೇ ಇಂದಿನ ತನಕ ಉಳಿದುಬಂದಿರುವುದು ಭಾರತದ ಒಂದು ಹೆಗ್ಗಳಿಕೆ. ಆ ಜ್ಞಾನದ ತಿಳಿವಳಿಕೆಗೆ ಹೊರಡುವ ಮುನ್ನ ಉಚ್ಚಾರಣೆಯ ಶುದ್ಧಿ ಅತ್ಯವಶ್ಯ. ಈ ಶುದ್ಧ ಉಚ್ಚಾರಣೆಯನ್ನು ತಿಳಿಸಿ ಹೇಳುವ ಕೈಪಿಡಿಗಳೇ ಶಿಕ್ಷಾ ಶಾಸ್ತ್ರದ ಗ್ರಂಥಗಳು. ಪ್ರಕೃತಿಪ್ರತ್ಯಯ, ಸಂಧಿಯಾದ ಪದಗಳ ನಿಯಮಗಳು ಮುಂತಾದವನ್ನು ನಿರೂಪಿಸತಕ್ಕವು ಪ್ರಾತಿಶಾಖ್ಯ ಗ್ರಂಥಗಳು. ಉಚ್ಚಾರಣೆಯ ವೈವಿಧ್ಯ ಕಾಲಕಾಲದಲ್ಲಿ ಒದಗಿದ ಕಾರಣ ಇವು ವೇದಗಳ ಬೇರೆ ಬೇರೆ ಶಾಖೆಗಳಿಗೆ ಬೇರೆ ಬೇರೆಯಾಗಿರುತ್ತವೆ. ವೇದಗಳ ಅಂತರಾರ್ಥ, ಮಥಿತಾರ್ಥವನ್ನು ಶಬ್ದನಿರುಕ್ತಿ ಅಥವಾ ನಿಷ್ಪತ್ತಿಯ ಮೂಲನಿಯಮಗಳ ಆಧಾರದಿಂದ ಗುರುತಿಸುವ ಶಾಸ್ತ್ರ ನಿರುಕ್ತ. ವೇದೋಕ್ತವಾದ ಯಜ್ಞಾದಿ ಕರ್ಮಗಳನ್ನು ಯಾವ ಯಾವ ಕಾಲದಲ್ಲಿ ಆಚರಿಸಬೇಕೆಂಬುದನ್ನು ಗ್ರಹಗತಿಗಳ ಮೇಲಿಂದ ನಿರ್ಣಯಿಸುವ ಶಾಸ್ತ್ರ ಜ್ಯೋತಿಷ. ಎಲ್ಲಕ್ಕಿಂತ ಹೆಚ್ಚಾಗಿ, ವೇದವಿಧಿಗಳ ವಿನಿಯೋಗ ಯಾವ ಕರ್ಮಾಂಗಕ್ಕೆ, ಯಾವ ವರ್ಣಾಶ್ರಮಗಳ ಸ್ಥಿತಿಗೆ ಎಂಬುದನ್ನು ತೀರ್ಮಾನಿಸುವ ಮಹತ್ಕಾರ್ಯ ಕಲ್ಪ. ಇದರಲ್ಲಿ ಕೂಡ ಧರ್ಮ, ಗೃಹ್ಯ, ಶ್ರೌತ, ಶುಲ್ಬ ಮುಂತಾದ ಪ್ರಭೇದಗಳು ಸಹಜವಾಗಿಯೇ ಉಂಟಾಗಿವೆ. ಪ್ರಾಚೀನ ವೇದರಾಶಿ ಉದಯವಾದ ಬಳಿಕ ಅದರ ಸರ್ವಾಂಗೀಣ ಅಧ್ಯಯನ, ಅರ್ಥಜ್ಞಾನಗಳಿಗೆ ನೆರವಾಗಬಲ್ಲ ವಿವಿಧ ವಿಶಿಷ್ಟ ಶಾಸ್ತ್ರಗಳು ಮೂಡಿ ಬಂದುವು. ಇವುಗಳಿಗೆ ಆರುವೇದಾಂಗಗಳು (ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ) ಎಂಬ ಸಾಂಪ್ರದಾಯಿಕ ಹೆಸರು ಬಂದಿದೆ. ಭಾರತೀಯ ಪರಂಪರೆಯಂತೆ ವೇದಜ್ಞಾನಕ್ಕೆ ಈ ಎಲ್ಲ ವೇದಾಂಗಗಳ ಪರಿಜ್ಞಾನ ಅನಿವಾರ್ಯ. 

	ಆಧುನಿಕ ವೇದ ವಿದ್ವಾಂಸರ ಅಭಿಪ್ರಾಯದಂತೆ ಚತುರ್ವೇದ ಸಂಹಿತೆಗಳ ಕಾಲದ ಬಳಿಕ ಬ್ರಾಹ್ಮಣ, ಆರಣ್ಯಕ, ಉಪನಿಷತ್ತುಗಳ ಕಾಲ ಕ್ರಿ.ಪೂ. 600ರ ವೇಳೆಗೆ ಮುಗಿಯುತ್ತದೆ. ಆದರೆ ಉಪನಿಷತ್ತು ಗಳಲ್ಲೇ ವೇದಾಂಗಗಳ ಮೊದಲ ಉಲ್ಲೇಖವಿರುವುದರಿಂದ ಅವುಗಳ ಆದ್ಯ ರಚನೆಗಳ ಕಾಲ ಆರಣ್ಯಕೋಪನಿಷತ್ತುಗಳಷ್ಟೇ ಹಳೆಯದಾಗಿರ ಬೇಕು; ಇನ್ನೂ ಸ್ವಲ್ಪ ಪ್ರಾಚೀನವೂ ಇದ್ದಿರಬಹುದು. (ಉದಾಹರಣೆಗೆ: ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಛಂದೋ ಜ್ಯೋತಿಷಮ್-ಮುಂಡಕ ಉಪನಿಷತ್). ಆ ಪ್ರಾಚೀನ ವೇದಾಂಗಕಾರರ ಹೆಸರುಗಳನ್ನು ಪಾಣಿನಿ, ಯಾಸ್ಕ ಮೊದಲಾದವರು ಹೆಸರಿಸಿಯೂ ಇದ್ದಾರೆ-ಕೌತ್ಸ, ಶಾಕಟಾಯನ, ಶಾಕಲ್ಯ ಇತ್ಯಾದಿ. ಆದರೆ ಅವು ಉಪಲಬ್ಧವಿಲ್ಲ. ಅವನ್ನೆಲ್ಲ ಮಥಿಸಿ, ಸಾರವನ್ನು ಸಂಗ್ರಹಿಸಿ, ಅತ್ಯಂತ ಮೌಲಿಕವೆನ್ನಬಹುದಾದ ಪ್ರಮಾಣಗ್ರಂಥಗಳನ್ನು ವಿಶಿಷ್ಟವಾದ ಸೂತ್ರ ಶೈಲಿಯಲ್ಲಿ ರಚಿಸಿದ ಆಕರ ಗ್ರಂಥಗಳು ಮಾತ್ರ ಇಂದು ಉಪಲಬ್ಧವಿವೆ. ಉದಾಹರಣೆಗೆ ಪಾಣಿನಿಯ ಅಷ್ಟಾಧ್ಯಾಯೀ ಸೂತ್ರ, ಯಾಸ್ಕನ ನಿರುಕ್ತ, ಪಿಂಗಲನ ಛಂದಸ್ಸೂತ್ರ, ಪಾಣಿನಿಯದೆನ್ನಲಾದ ಶಿಕಾ ಕಾರಿಕೆ ಮತ್ತು ಅಜ್ಞಾತಕರ್ತೃವಿನ ವೇದಾಂಗಜ್ಯೋತಿಷ ಹಾಗೂ ನಾನಾ ಶಾಖೆಗಳವರ ಧರ್ಮ, ಗೃಹ್ಯ ಮುಂತಾದ ಕಲ್ಪಸೂತ್ರಗಳು. ಹೆಸರಿಗೆ ಇವು ವೇದಾಂಗಗಳಾದರೂ ಇವುಗಳ ವ್ಯಾಪ್ತಿ ವೇದ ವಿವರಣೆಗೆ ಮೀಸಲಾಗಿಲ್ಲ. ಪಾಣಿನಿಯ ವ್ಯಾಕರಣ ಸೂತ್ರದಲ್ಲಿ ಸ್ವರವೈದಿಕ ಪ್ರಕ್ರಿಯೆಯೇ ಗೌಣ; ಸಂಸ್ಕøತ ಭಾಷಾ ನಿಯಮವೇ ಮುಖ್ಯ; ಪಿಂಗಲನ ಛಂದಸ್ಸೂತ್ರದಲ್ಲೂ ಅಷ್ಟೆ; ವೇದಛಂದೋಜಾತಿಗಳಿಗಿಂತ ಸಂಸ್ಕøತದವಕ್ಕೇ ಪ್ರಾಶಸ್ತ್ಯ. ಕಲ್ಪ ಮಂತ್ರಗಳ ವಿನಿಯೋಗವ್ಯವಸ್ಥೆ ಇವಕ್ಕೇ ಪ್ರಾಶಸ್ತ್ಯ. ಆದರೆ ನಿರುಕ್ತ, ವೇದಾಂಗ ಜ್ಯೋತಿಷ, ಶಿಕ್ಷಾ ಈ ಮೂರು ಮಾತ್ರ ವೇದವಿಷಯಕ್ಕೆ ಹೆಚ್ಚಿನ ಸ್ಥಾನವೀಯುತ್ತವೆ ಎನ್ನಬಹುದು. 

	ಈ ಆರೂ ವೇದಾಂಗಗಳಿಗೆ ಕ್ರಿ.ಪೂ. 7-6ನೆಯ ಶತಮಾನದಿಂದ ಹಿಡಿದು ಮುಂದೆ ಕ್ರಿಸ್ತಶಕದ ಅನೇಕ ಶತಮಾನಗಳ ತನಕ ವಿಚಾರ ವಿಕಾಸದ ಮಜಲುಗಳನ್ನು ಗುರುತಿಸಲು ಅವಕಾಶ ನೀಡುವ ಬೆಳೆವಣಿಗೆ ಕಾಣುತ್ತದೆ. ಪಾಣಿನಿ ಸೂತ್ರಗಳು ಕಾತ್ಯಾಯನ, ಪತಂಜಲಿ, ಭರ್ತೃಹರಿಗ ಳಿಂದ ವಿಸ್ತøತವಾಗಿ 17ನೆಯ ಶತಮಾನದ ಭಟ್ಟೋಜಿ ದೀಕ್ಷಿತನವರೆಗೆ ಬೃಹತ್ತಾದ ಗ್ರಂಥರಾಶಿಯನ್ನು ಒಳಗೊಳ್ಳುತ್ತದೆ. ಛಂದಶ್ಶಾಸ್ತ್ರವೂ ಹಾಗೆಯೇ. ಪಿಂಗಲನಿಂದ ಆರಂಭವಾಗಿ ಜಯದೇವಾದಿಗಳಿಂದ ಪ್ರವರ್ಧಮಾನಕ್ಕೆ  ಬಂದು ಈಚಿನ ಕೇದಾರಭಟ್ಟನ ವೃತ್ತರತ್ನಾಕರದಲ್ಲಿ ಸುವ್ಯವಸ್ಥಿತವಾಗುತ್ತದೆ. ಜ್ಯೋತಿಷ ಶಾಸ್ತ್ರ ಫಲಜ್ಯೋತಿಷದತ್ತ ನೂರಾರು ಧರ್ಮಶಾಸ್ತ್ರಗಳಲ್ಲಿ ಪರಿಣತಿ ಪಡೆಯುತ್ತದೆ. ಆದರೆ ಸಾಮಾನ್ಯವಾಗಿ ವೇದಾಂಗವೆಂದಾಗ ಈ ವಿಸ್ತøತ ಬೆಳೆವಣಿಗೆಯನ್ನು ವಿದ್ವಾಂಸರು ದೃಷ್ಟಿಯಲ್ಲಿ ತರುವುದಿಲ್ಲ. ಮೂಲ ಸೂತ್ರಶೈಲಿಯ ಪ್ರಾಚೀನ ಗ್ರಂಥಗಳಷ್ಟನ್ನೇ ಗ್ರಹಿಸುತ್ತಾರೆ. 

	ಈ ಆರು ವೇದಾಂಗಗಳಲ್ಲಿ ಯಾವುದು ಹೆಚ್ಚು, ಯಾವುದು ಕಡಮೆ ಎಂಬ ಬಗೆಗೆ ಆಯಾ ವೇದಾಂಗಕಾರರು ಭಿನ್ನಮತ ತಳೆಯುವುದುಂಟು. ಇವುಗಳಲ್ಲಿ ಒಂದೊಂದನ್ನೂ ಕುರಿತು ಕೆಲವು ಮೌಲಿಕ ಅಂಶಗಳನ್ನಿಲ್ಲಿ ಉಲ್ಲೇಖಿಸಲಾಗಿದೆ : 

	1. ಶಿಕ್ಷಾ : ಪದದ ಯೌಗಿಕಾರ್ಥ ಬೋಧನ ಅರ್ಥಾತ್ ಶಿಕ್ಷಣ; ಪ್ರಕೃತದಲ್ಲಿ ವೇದಸಂಹಿತೆಯ ಸ್ವರಗಳ ಶುದ್ಧ ಉಚ್ಚಾರಣದ ಬೋಧನೆ. ತೈತ್ತಿರೀಯ ಉಪನಿಷತ್ ಇದನ್ನು ಕುರಿತ ಪ್ರಾಚೀನ ಹೇಳಿಕೆ ಎನ್ನಬಹುದು; “ಅಥ ಶಿಕ್ಷಾಂ ವ್ಯಾಖ್ಯಾಸ್ಸಾಮ ಃ - ವರ್ಣಃ ಸ್ವರಃ ಮಾತ್ರಾ ಬಲಮ್ ಸಾಮ ಸನ್ತಾನಃ ಶಂಕರಾಚಾರ್ಯರ ಭಾಷ್ಯದಂತೆ ವರ್ಣವೆಂದರೆ ಅಕಾರಾದಿ ಅಕ್ಷರಗಳು. ಸ್ವರ ಎಂದರೆ ಉದಾತ್ತ, ಅನುದಾತ್ತ ಸ್ವರಿತ ಎಂಬ ಸ್ವರಗಳು. ಮಾತ್ರಾ ಎಂದರೆ ಹ್ರಸ್ವ ದೀರ್ಘ ಪ್ಲುತಗಳು. ಬಲ ಎಂದರೆ ಉಚ್ಚಾರಣೆಯ ಕಾಲದಲ್ಲಿ ಬಾಯೊಳಗೆ ನಡೆಯುವ ಯತ್ನವಿಶೇಷ. ಸಾಮ ಎಂದರೆ ಉಚ್ಚಾರಣೆಯ ಮಧ್ಯಮ ಅರ್ಥಾತ್ ಸಮಸ್ಥಾಯಿ. ಸಂತಾನ ಎಂದರೆ ಸಂಹಿತೆ ಅಥವಾ ಪದಗಳಿಗೆ ಸಂಧಿಯಾದಾಗ ಬರುವ ರೂಪ. ವೇದಕರ್ಮಗಳನ್ನು ಅನುಷ್ಠಾನ ಮಾಡುವಾಗ ಈ ಎಲ್ಲ ಅಂಶಗಳಲ್ಲೂ ಶುದ್ಧಿ ಅತ್ಯಗತ್ಯವೆಂದು ಪ್ರಾಚೀನರ ನಂಬಿಕೆಯಾಗಿತ್ತು. ಇಂದಿನ ಧ್ವನಿವಿಜ್ಞಾನದೊಡನೆ ಶಿಕ್ಷಾಶಾಸ್ತ್ರವನ್ನು ಸಮೀಕರಿಸಬಹುದು. ಇಡಿಯ ಋಗ್ವೇದಸಂಹಿತೆಗೆ ಶೌನಕರು ಪದಪಾಠ ಬರೆದಿರುವುದು ಈ ಶಿಕ್ಷಾಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿಯೇ. ವೇದವ್ಯಾಸರು ಮಾಡಿದರೆನ್ನಲಾಗುವ ವೇದಗಳ ಸಂಹಿತಾ ಪಾಠ ಕೂಡ ಶಿಕ್ಷಾಶಾಸ್ತ್ರದ ಪರಿಣತಿಯಿಂದಲೇ. ಇವು ವೇದಗಳ ವಿಭಿನ್ನ ಶಾಖೆಗಳಿಗೂ ಬೇರೆ ಬೇರೆ ಆಗುತ್ತಿದ್ದ ಪ್ರಯುಕ್ತ ಒಂದೊಂದೂ ಶಾಖೆಯ ಶುದ್ಧೋಚ್ಚಾರ ಣೆಯ ಸುವ್ಯವಸ್ಥೆಗಾಗಿ ರಚಿತವಾದ ಗ್ರಂಥಗಳೇ ಪ್ರಾತಿಶಾಖ್ಯಗಳು. ಶೌನಕನ ಋಗ್ವೇದಪ್ರಾತಿಶಾಖ್ಯ, ಕಾತ್ಯಾಯನನ ವಾಜಸನೇಯಿ ಪ್ರಾತಿಶಾಖ್ಯ ಸೂತ್ರ ಇವು ಉದಾಹರಣೆಗಳು. ಪಾಣಿನಿ, ಭಾರದ್ವಾಜ, ವ್ಯಾಸ, ವಸಿಷ್ಠ, ಯಾಜ್ಞವಲ್ಕ್ಯ ಮೊದಲಾದವರು ಬರೆದರೆನ್ನಲಾಗಿರುವ ಶಿಕ್ಷಾಗ್ರಂಥಗಳಿವೆ. ಇವು ಸೂತ್ರರೂಪದಲ್ಲಿರದೆ ಶ್ಲೋಕರೂಪದಲ್ಲಿರುವುದರಿಂದ ಪ್ರಾತಿಶಾಖ್ಯಗಳಷ್ಟು ಪ್ರಾಚೀನವಲ್ಲವೆಂದು ಭಾವಿಸಲಾಗಿದೆ. ಋಷಿ ದೇವತೆ ಛಂದಸ್ಸುಗಳನ್ನು ಮಂತ್ರಗಳಿಗೆ ಅನುಕ್ರಮವಾಗಿ ತಿಳಿಸುವ ಕೈಪಿಡಿಗಳೇ ಅನುಕ್ರಮಣಿಗಳು. ಕಾತ್ಯಾಯನ ಬರೆದ ಸರ್ವಾನುಕ್ರಮಣಿ ದೊರೆತಿದೆ. ಮಂತ್ರಗಳ, ದೇವತೆಗಳ ವಿಚಾರವನ್ನು ವ್ಯವಸ್ಥಿತವಾಗಿ ತಿಳಿಸಲು ಶೌನಕ ಬೃಹದ್ದೇವತಾ ಎಂಬ ಮೌಲಿಕ ಗ್ರಂಥ ರಚಿಸಿದ್ದಾನೆ. ಋಗ್ವಿಧಾನ ಪ್ರತ್ಯೇಕ ಮಂತ್ರಗಳ ಜಪದಿಂದ ಬರುವ ಫಲಗಳನ್ನು ತಿಳಿಸುತ್ತದೆ. ಹೀಗೆ ಪ್ರಾಚೀನಕಾಲದಲ್ಲಿ ವೇದಾಧ್ಯಯನಕ್ಕೆ ಮಹತ್ತ್ವಪೂರ್ಣ ಸಹಾಯಕ ಗ್ರಂಥಗಳ ರಚನೆಯಾಗಿದ್ದುದನ್ನು ಕಾಣುತ್ತೇವೆ. 

	2 ವ್ಯಾಕರಣ : ವೇದಾಂಗಗಳಲ್ಲೆಲ್ಲ ಮುಖ್ಯವೆನಿಸಿರುವ ವ್ಯಾಕರಣದ ಹಿರಿಮೆ ಅಪಾರವಾದುದು. ಬ್ರಹ್ಮಜ್ಞಾನಕ್ಕೆ ಅತ್ಯಂತ ಸಮೀಪದ ಸಾಧನವದು; ಎಲ್ಲ ತಪಸ್ಸುಗಳಿಗಿಂತಲೂ ಅಧಿಕವಾದ ತಪಸ್ಸು ಅದು; ವೇದಾಂಗಗಳಲ್ಲೆಲ್ಲ ಅಗ್ರಸ್ಥಾನಕ್ಕೆ ಪಾತ್ರವಾದುದು ಎಂದು ಭರ್ತೃಹರಿ ತನ್ನ ವಾಕ್ಯಪದೀಯದಲ್ಲಿ ಅದರ ಗುಣಗಾನ ಮಾಡಿದ್ದಾನೆ :

ಆಸನ್ನಂ ಬ್ರಹ್ಮಣಸ್ತಸ್ಯ ತಪಸಾಮುತ್ತಮಂ ತಪಃ
ಪ್ರಥಮಂ ಛಂದಸಾಮಂಗಮಾಹುವ್ರ್ಯಾಕರಣಂ ಬುಧಾಃ

	ಪ್ರಪಂಚದಲ್ಲಿ ಯಾವ ಭಾಷೆಗೂ ಪಾಣಿನಿ ವ್ಯಾಕರಣದಷ್ಟು ವೈಜ್ಞಾನಿಕವೂ ವ್ಯವಸ್ಥಿತವೂ ಆದ ವ್ಯಾಕರಣವಿಲ್ಲವೆಂದು ಇಂದಿನ ಭಾಷಾವಿಜ್ಞಾನಿಗಳೂ ಹೇಳುವಷ್ಟು ಅದು ಉತ್ತಮವಾಗಿದೆ. ವೇದಗಳ ರಕ್ಷಣೆ, ಊಹಾಪೋಹ ಕೌಶಲ, ಲಘುಗ್ರಹಣೆ, ಅಸಂದೇಹ-ಇವು ಈ ವೇದಾಂಗದ ಫಲಗಳೆಂದು ಮಹಾಭಾಷ್ಯದಲ್ಲಿ ಪತಂಜಲಿಯೇ ಹೇಳಿದ್ದಾನೆ. 

	3 ಛಂದಸ್ಸು : ಸಾಮವೇದದಲ್ಲಿ ಬರುವ ಗಾನಶೈಲಿಗಳ - ಉಕ್ಥ, ಸ್ತೋಭ, ಗಾನ ಇತ್ಯಾದಿ ವಿವರಣೆ ನಿದಾನ ಸೂತ್ರದಲ್ಲಿ ಬರುತ್ತದೆ. ಇದು ಪ್ರಾಚೀನತಮ ರಚನೆ. ಆದರೆ ಮುಖ್ಯಗ್ರಂಥವಾದ ಪಿಂಗಲನ ಛಂದಸ್ಸೂತ್ರ ಮಾತ್ರ ಉತ್ತರಕಾಲೀನ. ಏಕೆಂದರೆ ಅದರಲ್ಲಿ ವೈದಿಕ ಛಂದಸ್ಸುಗಳಾದ ಗಾಯತ್ರೀ, ಜಗತೀ, ತ್ರಿಷ್ಟುಭ್ ಮುಂತಾದವುಗಳ ವಿವರಣೆಗಿಂತ ಹೆಚ್ಚಾಗಿ ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ ಮುಂತಾದ ಅನಂತರಕಾಲೀನ ಸಂಸ್ಕøತ ಛಂದೋಬಂಧಗಳ ವಿವರಣೆಯೇ ವಿಪುಲವಾಗಿದೆ. 

	4 ನಿರುಕ್ತ : ಋಗ್ವೇದದ ಕ್ಲಿಷ್ಟಪದಗಳ ಸಂಗ್ರಹಗಳನ್ನು 6ನೆಯ ಶತಮಾನದಷ್ಟು ಪ್ರಾಚೀನನಾದ ಯಾಸ್ಕನ ಕಾಲಕ್ಕೆ ಹಿಂದಿನವರು ರಚಿಸಿದ್ದರು. ಭೂಮಿಯೆಂಬ ಅರ್ಥವನ್ನು ಹೇಳಲು 21 ವೈದಿಕ ಶಬ್ದಗಳು, ನೀರನ್ನು ಬೋಧಿಸಲು ಇರುವ 101 ಶಬ್ದಗಳು, ಹೋಗು ಎಂಬ ಕ್ರಿಯೆಯನ್ನು ಹೇಳಲು ಸಾಧ್ಯವಿರುವ ವೇದದ 122 ಪದಗಳು ಇವೇ ಮುಂತಾದ ಪಟ್ಟಿಗಳಿಗೆ ನಿಘಂಟು ಎನ್ನುತ್ತಿದ್ದರು. ತನ್ನ ಕಾಲದಲ್ಲಿ ಪೂರ್ವದಿಂದಲೂ ಬಂದಿದ್ದ ಈ ನಿಘಂಟುಗಳನ್ನು ಆಧಾರವಾಗಿಟ್ಟು ಕೊಂಡು ಇವನ್ನು ವಿವರವಾಗಿ ಮೊದಲಿಗೇ ತನ್ನ ನಿರುಕ್ತದ ಪ್ರಥಮಾಧ್ಯಾ ಯದಲ್ಲಿ ಯಾಸ್ಕ ವಿವೇಚಿಸಿದ್ದಾನೆ. ಎರಡನೆಯ ನೈಗಮ ಕಾಂಡದಲ್ಲಿ ಎರಡರ್ಥಗಳುಳ್ಳ ಕ್ಲಿಷ್ಟಶಬ್ದಗಳನ್ನು ವಿವರಿಸಿದ್ದಾನೆ. ಮೂರನೆಯ ದೈವತಕಾಂಡದಲ್ಲಿ ದೇವತೆಗಳನ್ನು ವರ್ಗೀಕರಿಸಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ಲಿಷ್ಟವಾದ ಅನೇಕ ಋಗ್ವೇದಮಂತ್ರಗಳಿಗೆ ಬಿಡಿಸಿ ಅರ್ಥ ಹೇಳಿರುವುದು ಇವನ ವೈಶಿಷ್ಟ್ಯ. ಇವನ್ನು ಎಲ್ಲೆಡೆಯಲ್ಲಿಯೂ ಉದಾಹರಿಸಿದ್ದಾನೆ. 

	5 ಜ್ಯೋತಿಷ : ಪದ್ಯರೂಪವಾಗಿ ಈ ಶೀರ್ಷಿಕೆಯಲ್ಲಿ ದೊರೆತಿರುವ ಒಂದೇ ಗ್ರಂಥ ವೇದಾಂಗ-ಜ್ಯೋತಿಷ. ಇದರಲ್ಲಿ ಎರಡು ಪಾಠಾಂತರಗಳಿವೆ : ಪದ್ಯ ಸಂಖ್ಯೆ ಒಂದರಲ್ಲಿ 43; ಇನ್ನೊಂದರಲ್ಲಿ 36. 27 ನಕ್ಷತ್ರ ರಾಶಿಗಳಲ್ಲಿ ಚಂದ್ರನ ಸಂಚಾರವನ್ನೂ ಅಯನಗಳು ಬದಲಿಸುವಾಗ ಸೂರ್ಯನ ಗತಿಯಲ್ಲಾಗುವ ಭೇದವನ್ನೂ ಹುಣ್ಣಿಮೆ ಅಮಾವಾಸ್ಯೆಗಳ ಲೆಕ್ಕವನ್ನೂ ಈ ಪದ್ಯಗಳು ತಿಳಿಸುತ್ತವೆ. 

	6 ಕಲ್ಪ : ಪ್ರಾಚೀನ ಬ್ರಾಹ್ಮಣ ಆರಣ್ಯಕ ಗ್ರಂಥಗಳ ಯಜ್ಞಕರ್ಮಗಳನ್ನು ಕುರಿತಂತೆ ಆಶ್ವಲಾಯನ, ಶೌನಕ ಮೊದಲಾದವರು ವ್ಯವಸ್ಥಿತವಾಗಿ ಬರೆದ ಸೂತ್ರಗಳೇ ಕಲ್ಪ. ಇವುಗಳ ವಿಷಯ ಕರ್ಮಾಚರಣೆಯ ವಿಧಿ ನಿಷೇಧಗಳು.  ಶ್ರೌತ ಯಾಗಗಳ ವಿಧಿಯನ್ನು ವಿವರಿಸುವ ಸೂತ್ರಗಳಿಗೆ ಶ್ರೌತ ಸೂತ್ರಗಳೆಂದು ಹೆಸರು. ಗೃಹಸ್ಥರು ಆಚರಿಸಬೇಕಾದ ವಿವಾಹಾದಿ ಕರ್ಮವಿಧಿಗಳನ್ನು ನಿರೂಪಿಸತಕ್ಕವೇ ಗೃಹ್ಯಸೂತ್ರಗಳು. ಶ್ರೌತಸೂತ್ರಗಳಲ್ಲಿ ಅಗ್ನಿಷ್ಟೋಮ, ದರ್ಶಪೌರ್ಣಮಾಸ, ಅಶ್ವಮೇಧ, ಸೋಮಯಾಗ ಮುಂತಾದ ಯಜ್ಞವಿಧಿಗಳ ವಿಸ್ತøತ ವಿಧಿನಿರೂಪಣೆ ಬರುತ್ತದೆ. ಜಾತಕರ್ಮದಿಂದಾರಂಭಿಸಿ ಉಪನಯನ,  ವಿವಾಹಾದಿ ಷೋಡಶ ಸಂಸ್ಕಾರಗಳೂ ಗೃಹ್ಯಸೂತ್ರಗಳ ವಿಷಯಮಾಲಿಕೆಯಲ್ಲಿ ಬರುತ್ತವೆ. ಶ್ರಾದ್ಧಾದಿ ಕರ್ಮಗಳ ವಿಷಯವೂ ಇವುಗಳಲ್ಲಿಯೇ ಬರುತ್ತದೆ. ನಾಲ್ಕು ವರ್ಣಗಳ ಮತ್ತು ನಾಲ್ಕು ಆಶ್ರಮಗಳ ಧರ್ಮವನ್ನು ವ್ಯವಸ್ಥಿತವಾಗಿ ಕ್ರೋಡಿಕರಿಸಿ ಕೊಡುವ ಸೂತ್ರಗಳೇ ಧರ್ಮಸೂತ್ರಗಳು. ಯಜ್ಞವೇದಿಯ ಅಳತೆ, ರಚನೆ ಇತ್ಯಾದಿಗಳನ್ನು ಕೊಡುವ ಶುಲ್ಬಸೂತ್ರಗಳು ಶ್ರೌತಸೂತ್ರಗಳಿಗೆ ಅನುಬಂಧದಂತೆ ಬರುತ್ತವೆ. 

	ವೈದಿಕಕಾಲೀನ ಜೀವನಮಾರ್ಗದ ಅಂತರ್ದರ್ಶನ ಈ ಸೂತ್ರಗ್ರಂಥಗಳ ಅಧ್ಯಯನದಿಂದ ಲಭ್ಯವಾಗುತ್ತದೆ. ಈ ಕಲ್ಪಸೂತ್ರಗಳು ಆಪಸ್ತಂಭ, ಬೋಧಾಯನ, ಭಾರದ್ವಾಜ ಮೊದಲಾದವರ ಹೆಸರಿನಲ್ಲಿ ಬೇರೆ ಬೇರೆ ವೇದಶಾಖೆಗಳಿಗೂ ಬೇರೆಬೇರೆಯಾಗಿ ದೊರೆಯುತ್ತವೆ. ಯಾಜ್ಞಿಕರಿಗೆ ಇವೇ ಆಧಾರಗ್ರಂಥಗಳು.					
		(ಕೆ.ಕೆ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ